ವೇತನ ವಿಳಂಬ ಹಿನ್ನೆಲೆ ಬಂಡೀಪುರದಲ್ಲಿ ಏಪ್ರಿಲ್ 1ರಿಂದ ಅರಣ್ಯ ಸಿಬ್ಬಂದಿ ಮುಷ್ಕರ..!
ಬೆಂಗಳೂರು: ಏಪ್ರಿಲ್ 1ರಿಂದ ವನ್ಯಜೀವಿ ವಿಭಾಗದ ಹಂಗಾಮಿ ನೌಕರರಿಂದ ಮುಷ್ಕರ. ಹೊರಗುತ್ತಿಗೆ ರದ್ದುಪಡಿಸಿ ಅರಣ್ಯ ಇಲಾಖೆಯಿಂದಲೇ ವೇತನ ಪಾವತಿಸುವುದೂ ಸೇರಿದಂತೆ ತಮ್ಮ ಹಲವು ಬೇಡಿಕೆ ಮುಂದಿಟ್ಟು ಏಪ್ರಿಲ್ 1ರಿಂದ ವನ್ಯಜೀವಿ ವಿಭಾಗದ ಹಂಗಾಮಿ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ದಿನಗೂಲಿ ಹೌರಗುತ್ತಿಗೆ ನೌಕರರ ಸಂಘದ ಉಪಾಧ್ಯಕ್ಷ ಎಸ್.ಎಸ್. ಹರೀಶ್ ಅವರು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಸುಮಾರು 6,000 ತಾತ್ಕಾಲಿಕ ಸಿಬ್ಬಂದಿ ಇದ್ದಾರೆ. ಇವರಲ್ಲಿ 4,000ಕ್ಕೂ ಹೆಚ್ಚು ಮಂದಿ ಮುಷ್ಕರದಲ್ಲಿ ಭಾಗವಹಿಸಲು ಸಮ್ಮತಿಸಿದ್ದಾರೆ. ವಾಚರ್‌ಗಳು, ಗಾರ್ಡ್‌ಗಳು, ಡ್ರೈವರ್‌ಗಳು ಸೇರಿದಂತೆ ಅರಣ್ಯದ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ . ಇದೇ ವೇಳೆ ಸಿಬ್ಬಂದಿ ಮಂಗಳವಾರ ನಡೆಯಬೇಕಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲೂ ಭಾಗವಹಿಸಲು ನಿರಾಕರಿಸಿದ್ದು, ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ನೇರವಾಗಿ ಸಭೆ ನಡೆಸಬೇಕು. ಕೇವಲ ಆನ್‌ಲೈನ್ ಚರ್ಚೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಿಳಿಸಿದ್ದಾರೆ. ಈ ಮುಷ್ಕರದಿಂದ ಅರಣ್ಯ ಪ್ರದೇಶಗಳಲ್ಲಿ ಗಸ್ತು ತಿರುಗುವಿಕೆ ಮತ್ತು ದಿನನಿತ್ಯದ ಕಾರ್ಯಗಳಿಗೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತಿದೆ ವಿಶೇಷವಾಗಿ ಬೇಸಿಗೆ ವೇಳೆ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಬೆಂಕಿ ತಡೆ ಹಾಗೂ ನಿಯಂತ್ರಣ ಕಾರ್ಯಗಳಿಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಜೊತೆಗೆ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗುವ ಭೀತಿ ಇದೆ ಎಂದು ಅಂದಾಜಿಸಲಾಗಿದೆ. ಸಿಬ್ಬಂದಿಯ ಪ್ರಮುಖ ಬೇಡಿಕೆಗಳಲ್ಲಿ, ವೇತನವನ್ನು ಮಧ್ಯವರ್ತಿಗಳ ಮೂಲಕ ನೀಡುವುದನ್ನು ನಿಲ್ಲಿಸಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂಬುದು ಪ್ರಮುಖವಾಗಿದೆ. ಮಧ್ಯವರ್ತಿಗಳ ಮೂಲಕ ವೇತನ ನೀಡುವ ವ್ಯವಸ್ಥೆಯಿಂದ ಒಂದು ತಿಂಗಳವರೆಗೂ ವಿಳಂಬವಾಗುತ್ತಿರುವುದಾಗಿ ಅವರು ಆರೋಪಿಸಿದ್ದಾರೆ.
ಇತರೆ ಸುದ್ದಿಗಳು