ವಿಜಯಪುರ: ಚಡಚಣ ಎಸ್ಬಿಐ ಬ್ಯಾಂಕ್ನಲ್ಲಿ ಭಾರಿ ದರೋಡೆ – ಕೋಟ್ಯಂತರ ನಗದು, ಚಿನ್ನ ದೋಚಿಕೊಂಡು ಪರಾರಿಯಾದ ದರೋಡೆ�
ಚಡಚಣ ಎಸ್ಬಿಐ ಬ್ಯಾಂಕ್ನಲ್ಲಿ ಭಾರಿ ದರೋಡೆ – ಕೋಟ್ಯಂತರ ನಗದು, ಚಿನ್ನ ದೋಚಿಕೊಂಡು ಪರಾರಿಯಾದ ದರೋಡೆಕೋರರು
ವಿಜಯಪುರ ಜಿಲ್ಲೆಯ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದಲ್ಲಿ ಮಂಗಳವಾರ ಸಂಜೆ ಭಾರಿ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿಯಂತೆ, ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಸುಮಾರು 7 ಗಂಟೆಯ ವೇಳೆಗೆ 7–8 ಮಂದಿ ಮುಸುಕುದಾರಿ ದರೋಡೆಕೋರರು ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಬ್ಯಾಂಕ್ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ್ದಾರೆ.
ಬ್ಯಾಂಕ್ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿದ ಬಳಿಕ, ಅಂದಾಜು ₹8 ಕೋಟಿ ನಗದು ಮತ್ತು ಸುಮಾರು 50 ಕೆ.ಜಿ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾದರೆಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ಆದರೆ ನಿಖರ ವಿವರಗಳಿಗಾಗಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ದರೋಡೆಕೋರರು ಮಿಲಿಟರಿ ಬಣ್ಣದ ಬಟ್ಟೆ ಧರಿಸಿ ಬ್ಯಾಂಕಿನ ಮುಖ್ಯದ್ವಾರದಿಂದ ಪ್ರವೇಶಿಸಿ, ಸಿಬ್ಬಂದಿ ಕೆಲಸ ಮುಗಿಸಿಕೊಂಡು ಹೊರಡುವ ಹೊತ್ತಿಗೇ ದಾಳಿ ನಡೆಸಿದ್ದಾರೆ. ಬಳಿಕ ಕದ್ದ ಚಿನ್ನಾಭರಣ ಮತ್ತು ನಗದನ್ನು ವಾಹನಗಳಲ್ಲಿ ಹೇರಿಕೊಂಡು ಮಹಾರಾಷ್ಟ್ರದತ್ತ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಶಾಖಾ ಸಿಬ್ಬಂದಿಯಿಂದ ವಿವರಗಳನ್ನು ಕಲೆಹಾಕುತ್ತಿದ್ದಾರೆ. ಬ್ಯಾಂಕ್ ಎದುರು ದರೋಡೆ ಸುದ್ದಿ ಹರಡುತ್ತಿದ್ದಂತೆಯೇ ಸಾವಿರಾರು ಜನ ಜಮಾಯಿಸಿದ್ದು, ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಿದೆ.
ಇತರೆ ಸುದ್ದಿಗಳು